ಫಿನ್ಲೆಂಡ್ ಉತ್ತರ ಯೂರೋಪಿನಲ್ಲಿರುವ ಒಂದು ಗಣರಾಜ್ಯ. ಉತ್ತರದಲ್ಲಿ ನಾರ್ವೆ, ವಾಯುವ್ಯದಲ್ಲಿ ಸ್ವೀಡನ್, ಪಶ್ಚಿಮದಲ್ಲಿ ಬಾತ್ನಿಯ ಖಾರಿ, ದಕ್ಷಿಣದಲ್ಲಿ ಫಿನ್ಲೆಂಡ್ ಕೊಲ್ಲಿ ಮತ್ತು ಪೂರ್ವದಲ್ಲಿ ಸೋವಿಯತ್ ಒಕ್ಕೂಟ ಇವೆ. ಉ.ಅ.590 48' 30"-700 5'3" ಮತ್ತು ಪೂ.ರೇ.190 7' 3"-310 35' 20" ನಡುವೆ ಇರುವ ಈ ದೇಶದ ವಿಸ್ತೀರ್ಣ 3,37,032 ಚ.ಕಿಮೀ., ಜನಸಂಖ್ಯೆ 4,800,000 (1981). ರಾಜಧಾನಿ ಹೆಲ್ಸಿಂಕೀ.

ಭೌತಿಕ ಭೂವಿವರಣೆ

ಮೇಲ್ಮೈಯ ಲಕ್ಷಣ : ಪಶ್ಚಿಮದ ಸ್ಕಾಂಡಿನೇವಿಯನ್ ಪರ್ವತಗಳಿಗೂ ಪೂರ್ವದ ಯೂರೋಪಿಯನ್ ಮೈದಾನಕ್ಕೂ ನಡುವೆ ಇರುವ ಫಿನ್ಲೆಂಡ್ ಬಹುತೇಕ ತಗ್ಗಾದ ನಾಡು. ದಕ್ಷಿಣ ಮತ್ತು ಪಶ್ಚಿಮದ ಕರಾವಳಿಯ ಪ್ರದೇಶ ಮೈದಾನವಾಗಿದೆ. ಇದರ ತೀರ ಬಹಳ ಅಂಕುಡೊಂಕು. ಸಾವಿರಾರು ಸಣ್ಣ ಪುಟ್ಟ ದ್ವೀಪಗಳು ಬಾತ್ನಿಯ ಖಾರಿಯಲ್ಲಿರುವ ಆಕ್ವೆನಾಮ್ನಾ (ಓಲಾಂಡ್) ದ್ವೀಪಸ್ತೋಮದತ್ತ ಚಾಚಿಕೊಂಡಂತೆ ಸಾಲಾಗಿವೆ. ಮಧ್ಯ ಫಿನ್ಲೆಂಡ್ ವ್ಯಾಪಕವಾದ ಸರೋವರ ಪ್ರಸ್ಥಭೂಮಿ. ಫಿನ್ಲೆಂಡಿನ 60,000 ಸರೋವರಗಳ ಪೈಕಿ ಹೆಚ್ಚು ಸಂಖ್ಯೆ ಇರುವುದು ಇಲ್ಲಿ. ಮಿಕಲೀ ಪ್ರಾಂತ್ಯದ ಸೇ. 40ರಷ್ಟು ಭಾಗ ನೀರು. ಉತ್ತರ ಫಿನ್ಲೆಂಡ್ ಉಳಿದ ಭಾಗಕ್ಕಿಂತ ಎತ್ತರವಾಗಿದೆ. ಇದು ನಿಬಿಡ ಕಾನನದಿಂದ ಕೊಡಿದೆ. ನಾರ್ವೆಯ ಎಲ್ಲೆಯ ಬಳಿಯ ಪ್ರದೇಶ ಫಿನ್ಲೆಂಡಿನಲ್ಲೇ ಅತ್ಯುನ್ನತವಾದ್ದು. ಎನಾಂಟಕಿಯೂ ಬಳಿ ಇರುವ ಹಾಲ್ಟಿಯಟುಂಟರೀ ಶಿಖರ ಸಮುದ್ರ ಮಟ್ಟದಿಂದ 1,324 ಮೀ ಎತ್ತರವಾಗಿದೆ.

ಇಲ್ಲಿ ವ್ಯಾಪಕವಾದ, ಪರಸ್ಪರ ಕೂಡಿಕೊಂಡಿರುವ ಸಾಗರ ಮತ್ತು ನದೀ ವ್ಯವಸ್ಥೆಯಿದೆ. ಇದರಿಂದ ಫಿನ್ಲೆಂಡಿಗೆ ನೈಸರ್ಗಿಕ ಜಲಮಾರ್ಗ ಸೌಲಭ್ಯವುಂಟಾಗಿದೆ.

ವಾಯುಗುಣ : ಫಿನ್ಲೆಂಡಿನ ಮೂರನೆಯ ಒಂದು ಭಾಗದಷ್ಟು ಪ್ರದೇಶ ಆರ್ಕ್‍ಟಿಕ್ ವೃತ್ತದ ಉತ್ತರಕ್ಕಿದೆ. ಆ ಪ್ರದೇಶದಲ್ಲಿ ಚಳಿಗಾಲ ಹೆಚ್ಚು ದೀರ್ಘ, ಬಹಳ ತೀವ್ರ, ಅಲ್ಲಿ-300ಛಿ ನಷ್ಟು ಕೆಳಕ್ಕೆ ಉಷ್ಣತೆ ಇಳಿಯುವುದುಂಟು. ಆ ಪ್ರದೇಶದಲ್ಲಿರುವ ಪರ್ವತಗಳ ಉತ್ತರದ ಬದಿಯಲ್ಲಿ ಹಿಮ ಕರಗುವುದೇ ಇಲ್ಲ. ಅಲ್ಲಿ ಬೇಸಗೆ ಕಿರಿದು. ಮೇ-ಜುಲೈ ಅವಧಿಯಲ್ಲಿ 270ಛಿ ವರೆಗೂ ಉಷ್ಣತೆ ಏರುತ್ತದೆ. ದಕ್ಷಿಣಕ್ಕೆ ಬಂದಂತೆ ಚಳಿಗಾಲ ಬೇಸಗೆ ಕಾಲಗಳ ಉಷ್ಣತೆಗಳ ಅಂತರ ಕಡಿಮೆಯಾಗುತ್ತದೆ. ಅಕ್ಷಾಂಶದ ಜೊತೆಗೆ ಪಕ್ಕದ ಸಮುದ್ರದ ಗಲ್ಫ್ ಉಷ್ಣೋದಕ ಪ್ರವಾಹ, ಮಾರುತಗಳ ದಿಕ್ಕು ಇವು ಇದಕ್ಕೆ ಕಾರಣ. ವಾರ್ಷಿಕ ಅವಪತನ ದಕ್ಷಿಣದಲ್ಲಿ 610 ಮೀಮೀ. ಉತ್ತರದಲ್ಲಿ ಸ್ವಲ್ಪ ಕಡಿಮೆ. ಇದರಲ್ಲಿ ಮೂರನೆಯ ಒಂದು ಭಾಗದಷ್ಟು ಹಿಮರೂಪದಲ್ಲಿ ಬೀಳುತ್ತದೆ. ಫಿನ್ಲೆಂಡಿನ ಎಲ್ಲ ನದೀ ಸರೋವರಗಳ ಮೇಲುಭಾಗಗಳು ಚಳಿಗಾಲದಲ್ಲಿ ಸ್ವಲ್ಪ ಕಾಲಾವಾದರೂ ಹೆಪ್ಪುಗಟ್ಟಿರುತ್ತವೆ.

ಸಸ್ಯ ಪ್ರಾಣಿ ಸಂಪತ್ತು : ಫಿನ್ಲೆಂಡಿನ ಬಹುಭಾಗ ದಟ್ಟವಾದ ಶಂಕುಪರ್ಣಿ ಸಸ್ಯಗಳಿಂದ ಕೂಡಿದೆ. ಅತ್ಯಂತ ದಕ್ಷಿಣ ಭಾಗದಲ್ಲಿ ಪರ್ಣಪಾತಿ ಸಸ್ಯಗಳುಂಟು ಶಂಕುಪರ್ಣಿ ಮರಗಳು ಪೀತದಾರು ಮತ್ತು ಸ್ಪ್ರೂಸ್, ಪರ್ಣಪಾತಿಗಳು ಹೇeóÉಲ್, ಆಸ್ಟೆನ್, ಮೇಪಲ್, ಎಲ್ಮ್, ನಿಂಬೆ ಮತ್ತು ಆಲ್ಡರ್. ತೀರ ಉತ್ತರಕ್ಕೆ ಹೋದಂತೆ ಶಿಲಾವಲ್ಕ ಸಾಮಾನ್ಯ. ಫಿನ್ಲೆಂಡಿನಲ್ಲಿ 1,000 ಕ್ಕೂ ಹೆಚ್ಚು ಪುಷ್ಪಜಾತಿಗಳಿವೆ.

ಫಿನ್ಲೆಂಡಿನಲ್ಲಿ ವನ್ಯಮೃಗಪಕ್ಷಿ ಸಂಪತ್ತು ಹೆಚ್ಚಾಗಿದೆ. ಕಡಲ ಕರೆಯ ದ್ವೀಪಗಳಲ್ಲಿ ಕಪ್ಪುಕೊಕ್ಕಿನ ಗಲ್‍ಗಳೂ ಟರ್ನ್‍ಗಳೂ ಗೂಡು ಕಟ್ಟಿ ವಾಸಿಸುತ್ತವೆ. ನೀರು ಕೋಳಿಗಳು ಒಳನಾಡಿನ ಸರೋವರಗಳಲ್ಲಿವೆ. ಸೈಬೀರಿಯನ್ ಜೇ, ಬಣ್ಣ ಬಣ್ಣದ ದಾಸರಹಕ್ಕಿ, ಹದ್ದು ಮುಂತಾದವೂ ಇವೆ. ಹಲವು ಹಕ್ಕಿಗಳು ಚಳಿಗಾಲದಲ್ಲಿ ದಕ್ಷಿಣಕ್ಕೆ ವಲಸೆ ಬರುತ್ತವೆ. ಮುಖ್ಯ ವನ್ಯಮೃಗಗಳು ಕರಡಿ, ತೋಳ, ವುಲ್ವರೀನ್, ಲಿಂಕ್ಸ್ ಮತ್ತು ಫಿನ್ನಿಪ್ ಕಡವೆ. ಕಾಡು ಹಿಮಸಾರಂಗಗಳು ಬಹುತೇಕ ಅದೃಶ್ಯವಾಗಿವೆ. ಉತ್ತರದಲ್ಲಿ ಉಳಿದಿರುವ ಹಿಮಸಾರಂಗಗಳು ಸಾಕುಪ್ರಾಣಿಗಳು. ಉತ್ತರದ ನದಿಗಳಲ್ಲಿ ಸಾಲ್ಮನ್, ಟ್ರಾಟ್, ಮತ್ತು ಸೈಕಾ ಮೀನುಗಳು ಯಥೇಚ್ಛವಾಗಿವೆ. ಪೈಕ್, ಚಾರ್, ಮತ್ತು ಪರ್ಚ್‍ಗಳೂ ಇವೆ.

ಮಾನವ ಭೂವಿವರಣೆ

	ಜನವಸತಿ: ಕೈಗಾರಿಕಾಕರಣದಿಂದ ಪಟ್ಟಣಿಗರ ಪ್ರಮಾಣ ಕ್ರಮವಾಗಿ ಬೆಳೆಯುತ್ತಿದೆಯಾದರೂ ಜನಸಂಖ್ಯೆಯಲ್ಲಿ ಸೇ.25ರಷ್ಟು ಭಾಗ ಈಗಲೂ ಕೃಷಿ ಹಾಗೂ ಅರಣ್ಯಗಾರಿಕೆಯನ್ನೇ ಅವಲಂಬಿಸಿದೆ. ಗ್ರಾಮೀಣ ವಸತಿ ದಟ್ಟವಾಗಿದೆ. ಕೃಷಿಕ್ಷೇತ್ರಗಳು ಸಾಮಾನ್ಯವಾಗಿ ಚಿಕ್ಕವು. ಒಡೆಯರೇ ಸಾಗುವಳಿದಾರರು. ಪಟ್ಟಣಗಳು ದಕ್ಷಿಣ ಭಾಗದಲ್ಲಿ ಅಧಿಕ. ಹಲವು ಪಟ್ಟಣಗಳೂ ನಗರಗಳೂ ಕಡಲ ತೀರದಲ್ಲಿವೆ. ಫಿನ್ಲೆಂಡಿನ ರಾಜಧಾನಿಯಾದ ಹೆಲ್ಸಿಂಕೀ ಇರುವುದು ಫಿನ್ಲೆಂಡ್ ಖಾರಿಯ ಮೇಲೆ. ಇದರ ಜನಸಂಖ್ಯೆ 5,17,000 (1970). ಬಾತ್ನಿಯ ಖಾರಿಯ ಮೇಲಿರುವ ಪ್ರಮುಖ ಪಟ್ಟಣಗಳು ವಾಸ (44,316) ಮತ್ತು ಆವುಲೂ (87,244). ಉತ್ತರದಲ್ಲಿ ತಕ್ಕಮಟ್ಟಿಗೆ ದೊಡ್ಡದೆನ್ನಬಹುದಾದ ಪಟ್ಟಣವೆಂದರೆ ರೋವನೀಯೆಮೀ (27,774). ನೈಋತ್ಯ ಫಿನ್ಲೆಂಡಿನ ಪ್ರಮುಖ ಬಂದರು ಟುರ್ಕೂ (1,53,300). ಇದು 1812ರ ವರೆಗೂ ಫಿನ್ಲೆಂಡಿನ ರಾಜಧಾನಿಯಾಗಿತ್ತು. ಇತರ ಪಟ್ಟಣಗಳು ಟ್ಯಾಂಪರೇ (1,57,697), ಎಸೋ (84,805), ಲಾಟೀ (89,360) ಮತ್ತು ಪಾರೀ (72,938) ಆಕ್ವೆನಾಮ್ನಾ ದ್ವೀಪಸ್ತೋಮದ ಮುಖ್ಯ ಪಟ್ಟಣ ಮರೀಹ್ಯಾಮನ್ (8,461).

	ಜನಾಂಗಗಳು: ಸುಮಾರು 5,000 ವರ್ಷಗಳಿಂದ ಇಲ್ಲಿ ಜನರು ನೆಲಸಿರುವುದಕ್ಕೆ ದಾಖಲೆಗಳಿವೆ. ಆದಿಕಾಲದಲ್ಲಿ ಇಲ್ಲಿಗೆ ಜನರು ಇಂದಿನ ರಷ್ಯ, ಸ್ಕಾಂಡಿನೇವಿಯ ಮತ್ತು ಮಧ್ಯ ಯೂರೋಪಿನ ಪ್ರದೇಶಗಳಿಂದ ಬಂದಿರಬಹುದು ಅಥವಾ ಇಲ್ಲಿಯವರು ಆ ಪ್ರದೇಶಗಳ ಜನರೊಂದಿಗೆ ಸಂಪರ್ಕ ಹೊಂದಿದ್ದರು. ಇಂದಿನ ಫಿನ್ ಜನರು ಸ್ಕಾಂಡಿನೇವಿಯನ್ ಮತ್ತು ಬಾಲ್ಟಿಕ್ ಜನಾಂಗಗಳಿಗೆ ಸೇರಿದವರಾಗಿದ್ದಾರೆ.

	ಭಾಷೆ : ಫಿನ್ಲೆಂಡಿನಲ್ಲಿ ಫಿನ್ನಿಷ್ ಮತ್ತು ಸ್ವೀಡಿಷ್ ಅಧಿಕೃತ ಭಾಷೆಗಳು. ಸೇ. 90 ಜರು ಫಿನ್ನಿಷ್ ಭಾಷೆ ಆಡುತ್ತಾರೆ. ಸ್ವೀಡಿಷ್ ಭಾಷೆ ಆಡುವವರು ಸೇ. 7ಕ್ಕಿಂತ ಸ್ವಲ್ಪ ಹೆಚ್ಚು. ಇವರು ಬಹುತೇಕ ಆಗ್ನೇಯ ಭಾಗದಲ್ಲಿದ್ದಾರೆ. ಮುಖ್ಯವಾಗಿ ಇವರು ಆಕ್ವೆನಾಮ್ನದಲ್ಲಿದ್ದಾರೆ. ಸ್ವೀಡಿಷ್ ಭಾಷೆ ಆಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅತ್ಯಂತ ಉತ್ತರದಲ್ಲಿ ಸುಮಾರು 3,800 ಮಂದಿ ಲ್ಯಾಪಿಪ್ ಭಾಷೆ ಆಡುತ್ತಾರೆ.

	ಧರ್ಮ : ಕ್ರೈಸ್ತ ಮತ ಸುಮಾರು 12ನೆಯ ಶತಮಾನದಲ್ಲಿ ಪೂರ್ವ ಮತ್ತು ಪಶ್ಚಿಮದ ಕಡೆಗಳಿಂದ ಫಿನ್ಲೆಂಡನ್ನು ಪ್ರವೇಶಿಸಿತು. ಸೇ. 93ರಷ್ಟು ಮಂದಿ ಇವಾಂಜೆಲಿಕಲ್ ಲೂತೆರನ್ ಚರ್ಚಿಗೆ ಸೇರಿದವರು. ಇದು ರಾಷ್ಟ್ರೀಯ ಚರ್ಚ್. ಇದರ ಬಿಷಪ್‍ಗಳನ್ನು ರಾಜ್ಯ ಮುಖ್ಯ ನೇಮಿಸುತ್ತಾನೆ. ಸೇ. 1ರಷ್ಟು ಜನರು ಗ್ರೀಕ್ ಆರ್ತೊಡಾಕ್ಸ್ ಚರ್ಚಿಗೆ ಸೇರಿದ್ದಾರೆ. ಸೇ. 5ರಷ್ಟು ಮಂದಿ ಯಾವುದೇ ಚರ್ಚಿಗೆ ಸೇರಿದವರೆಂದು ಹೇಳಿಕೊಂಡಿಲ್ಲ.

ಆರ್ಥಿಕತೆ

	ಫಿನ್ಲೆಂಡ್ ಪ್ರಪಂಚದ ಅತ್ಯಂತ ಸಂಪದ್ಯುಕ್ತ ದೇಶಗಳಲ್ಲಿ ಒಂದೇನೂ ಅಲ್ಲ. ಸ್ಕಾಂಡಿನೇವಿಯನ್ ದೇಶಗಳಲ್ಲೂ ಇದು ಮುಂದಿಲ್ಲ. ಇದರ ಉತ್ಪಾದಕತೆ ಕೆಳಮಟ್ಟದಲ್ಲಿದೆ. ಇದರ ಜನಸಂಖ್ಯೆ ಕಡಿಮೆ ಇರುವುದರಿಂದ ಸ್ಥೂಲ ರಾಷ್ಟ್ರೀಯ ಉತ್ಪನ್ನದಲ್ಲಿ ತಲಾ ಪಾಲು ಬ್ರಿಟನ್, ಆಸ್ಟ್ರಿಯ, ಇಟಲಿಗಳಲ್ಲಿರುವುದಕ್ಕಿಂತ ಅಧಿಕವಾಗಿದೆ. ಫಿನ್ಲೆಂಡ್ ಹಿಂದಿನಿಂದ ಕೃಷಿ ಪ್ರಧಾನ ದೇಶವಾಗಿತ್ತು. ಕಳೆದ ದಶಕದಿಂದೀಚೆಗೆ ಕೈಗಾರಿಕೆಯ ಪ್ರಾಮುಖ್ಯ ಬೆಳೆಯುತ್ತಿದೆ.

	ಖನಿಜ ಸಂಪತ್ತು: ಫಿನ್ಲೆಂಡಿನಲ್ಲಿ ಸಾಕಷ್ಟು ಖನಿಜ ಸಂಪತ್ತಿಲ್ಲ. ಕಲ್ಲಿದ್ದಲಾಗಲಿ ಪೆಟ್ರೊಲಿಯಂ ಆಗಲಿ ಇಲ್ಲ. ಪ್ರಿಕ್ಯಾಂಬ್ರಿಯನ್ ಶಿಲಾಸ್ತರಗಳಲ್ಲಿ ಹಲವು ಖನಿಜಗಳಿವೆ. ಆದರೆ ಗಣಿಗಾರಿಕೆ ಅಭಿವೃದ್ಧಿ ಹೊಂದಿಲ್ಲ. ಪೂರ್ವದಲ್ಲಿರುವ ಔಟೊಕುಂಪುವಿನಲ್ಲಿ ಫಿನ್ಲೆಂಡಿನ ಅತ್ಯಂತ ದೊಡ್ಡ ತಾಮ್ರದ ಗಣಿ ಇದೆ. ಕಬ್ಬಿಣ, ವೆನೆಡಿಯಮ್ ಮತ್ತು ಟಿಟ್ಯಾನಿಯಮ್ ಇವು ಅಲ್ಪ ಪರಿಮಾಣಗಳಲ್ಲಿ ಒಟಾನ್ಮಾಕಿಯಲ್ಲಿ ದೊರಕುತ್ತವೆ. ಅಕಾಸ್ಲಾಂಪೋಲೋದಲ್ಲಿ ಹೊಸ ಕಬ್ಬಿಣ ಅದುರು ನಿಕ್ಷೇಪಗಳಿರುವುದು ಗೋಚರವಾಗಿದೆ. ಗ್ರಾನೈಟನ್ನೂ ತೆಗೆಯಲಾಗುತ್ತಿದೆ. ನೈಋತ್ಯದ ಪರ್ಗಾಸ್ ಮತ್ತು ಲೋಜಗಳಲ್ಲೂ ಆಗ್ನೇಯದ ಲ್ಯಾಪಿನ್ರಾಂಟದಲ್ಲೂ ಸಿಮೆಂಟ್ ಉತ್ಪಾದನೆ ಬೆಳೆಯುತ್ತಿದೆ.

ಕೃಷಿ : ದೇಶದ ಒಟ್ಟು ಜನಸಂಖ್ಯೆಯ ಸೇ. 20ರಷ್ಟು ಮಂದಿಯ ಕಸಬುಗಳು ಕೃಷಿ ಮತ್ತು ಅರಣ್ಯಗಾರಿಕೆ. ಅನೇಕ ಜಮೀನುಗಳಲ್ಲಿ ಕಾಡುಗಳೂ ಇವೆ. ಮೂರನೆಯ ಒಂದು ಭಾಗದಷ್ಟು ಹಿಡುವಳಿಗಳಲ್ಲಿ ಸು. 5 ಹೆಕ್ಟೇರುಗಳಿಗಿಂತ ವಿಸ್ತೀರ್ಣದ ಸಾಗುವಳಿ ಜಮೀನುಗಳಿವೆ. ಮುಖ್ಯ ಬೆಳೆಗಳು ಹುಲ್ಲು, ಕ್ಲೋವರ್, ಓಟ್ಸ್, ಬಾರ್ಲಿ, ಆಲೂಗಡ್ಡೆ, ಗೋದಿ, ರೈ, ಸಕ್ಕರೆ ಬೀಟ್ ಮತ್ತು ರೇಪ್. ಫಿನ್ಲೆಂಡಿನಲ್ಲಿ 85,000 ಕುದುರೆಗಳು, 8,89,000 ಕರೆಯುವ ಹಸುಗಳೂ, 9,84,000 ಇತರ ದನಗಳು, 1,89,000 ಕುರಿಗಳು, 10,02,000 ಹಂದಿಗಳು, 1,45,000 ಹಿಮಸಾರಂಗಗಳು, 80,00,000 ಕೋಳಿಗಳು ಇದ್ದುವು (1970). ದನಗಳನ್ನು ಸಾಕುವುದು ಮುಖ್ಯವಾಗಿ ಹೈನುಗಾರಿಕೆಗಾಗಿ.

	ಅರಣ್ಯಗಾರಿಕೆ : ಫಿನ್ಲೆಂಡಿನ ಸೇಕಡ 65ರಷ್ಟು ನೆಲ ಅರಣ್ಯಗಳಿಂದ ಆವೃತವಾಗಿದೆ. ಮರ ಇಲ್ಲಿಯ ಮುಖ್ಯ ಕಚ್ಚಾ ಸಾಮಗ್ರಿ. ಆದರೆ ಉತ್ತರ ಭಾಗದಲ್ಲಿ ಅರಣ್ಯಸಂಪತ್ತು ಬೇಗ ಕ್ಷೀಣಿಸುತ್ತಿದೆ. ನಷ್ಟವಾದ ಕಾಡಿನ ಬದಲು ಹೊಸ ಅರಣ್ಯಗಳನ್ನು ಬೆಳೆಸುವ ಕಾರ್ಯ ನಿಧಾನವಾಗಿ ಸಾಗಿದೆ. ಹೆಚ್ಚು ದೂರದಿಂದ ಮರದ ದಿಮ್ಮಿಗಳನ್ನು ಸಾಗಿಸುವುದರ ಖರ್ಚು ಅಧಿಕವಾಗಿರುವುದರಿಂದ ಅದು ಲಾಭದಾಯಕವಾಗಿಲ್ಲ. ಆದರೂ ನದಿ ಸರೋವರಗಳ ಮೂಲಕ ಮತ್ತು ರಸ್ತೆಗಳ ಮೂಲಕ ಮರವನ್ನು ಸಾಗಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ದಶಕದ ಅಂತ್ಯದಲ್ಲಿ ಮರದ ದಿಮ್ಮಿ ಮತ್ತು ಇತರ ಅರಣ್ಯ ಸಾಮಗ್ರಿಗಳ ರಫ್ತು ಒಟ್ಟು ರಫ್ತಿನ ಸುಮಾರು 2/3ರಷ್ಟಿತ್ತು.

	ಮೀನುಗಾರಿಕೆ : 1970ರಲ್ಲಿ ಫಿನ್ಲೆಂಡಿನ ಮೀನು ಉತ್ಪಾದನೆ 87,000 ಮೆಟ್ರಿಕ್ ಟನ್. ಸ್ಯಾಲ್‍ಮನ್, ಟ್ರೌಟ್, ಬಿಳಿ ಮೀನು, ಪೈಕ್, ಜಾಕ್ ಇವನ್ನು ವಿಶೇಷವಾಗಿ ಹಿಡಿಯಲಾಗುತ್ತಿದೆ ಸುಮಾರು 200ಕ್ಕೂ ಹೆಚ್ಚು ಮತ್ಸ್ಯ ಕೃಷಿಕೇಂದ್ರಗಳಿವೆ. ಬಾಲ್ಟಿಕ್ ಸಮುದ್ರದಲ್ಲಿ ಕೂಡ ಮೀನುಗಾರಿಕೆ ನಡೆಯುತ್ತದೆ.

	ವಿದ್ಯುತ್: ಫಿನ್ಲೆಂಡಿನ ವಿದ್ಯುತ್ ಉತ್ಪಾದನೆ ಮುಖ್ಯವಾಗಿ ಜಲಮೂಲವಾದುದು. 1971ರ ಒಟ್ಟು ವಿದ್ಯುತ್ ಉತ್ಪಾದನೆ ಗಂಟೆಗೆ 2,350 ಕೋಟಿ ಕಿವಾ. ಸ್ವೀಡನ್ನಿನೊಂದಿಗೆ ವಿದ್ಯುತ್ ಜಾಲವನ್ನು ನಿರ್ಮಿಸಿ, ಅಲ್ಲಿಂದಲೂ ವಿದ್ಯುತ್ತನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

	ಕೈಗಾರಿಕೆ : ಫಿನ್ಲೆಂಡಿನ ಕೈಗಾರಿಕೆಯ ಮೂಲಾಧಾರ ಮೆದು ಮರ. ಈ ಮರದ ತಿರುಳು ಮತ್ತು ಕಾಗದ ಕೈಗಾರಿಕೆಗಳು ಸರೋವರ, ನದಿ ಮತ್ತು ಅಳಿವೆಗಳ ದಡಗಳ ಮೇಲೆ ಸ್ಥಾಪಿತವಾಗಿವೆ. ಗೋಡೆಹಲಗೆ, ಪ್ಲೈವುಡ್, ವೆನೀರ್ ಮುಂತಾದವನ್ನು ತಯಾರಿಸುವ ಕಾರ್ಖಾನೆಗಳೂ ಇವೆ. ಪೀಠೋಪಕರಣವೇ ಮುಂತಾದ ಅಣೆಕಟ್ಟುಗಳು ತಯಾರಾಗುತ್ತವೆ. ಇವನ್ನು ಸ್ವೀಡನ್, ಪಶ್ಚಿಮ ಜರ್ಮನಿ, ಅಮೆರಿಕ, ಸೋವಿಯೆತ್ ಒಕ್ಕೂಟ ಮುಂತಾದ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಅಭಿವೃದ್ಧಿ ಹೊಂದುತ್ತಿದೆ. ಹಡಗು ನಿರ್ಮಾಣ ಮತ್ತು ಇಂಜನಿಯರಿಂಗ್ ಕೈಗಾರಿಕೆಗಳು 1944ರಿಂದ ಈಚೆಗೆ ಹೆಚ್ಚಾಗಿ ಬೆಳೆದಿವೆ. ಟ್ಯಾಂಟರೇಯಲ್ಲಿ ರೈಲುಗಾಡಿ ಮತ್ತು ಎಂಜಿನ್‍ಗಳು ತಯಾರಾಗುತ್ತವೆ. ಟುರ್ಕೂ ಮತ್ತು ಹೆಲ್ಸಿಂಕಿಯಲ್ಲಿ ಹಡಗುಗಳು ನಿರ್ಮಾಣವಾಗುತ್ತವೆ. ಹೆಲ್ಸಿಂಕಿಯಲ್ಲಿ ವಿದ್ಯುದುಪಕರಣಗಳೂ ತಯಾರಾಗುತ್ತವೆ. ತೈಲಶುದ್ಧೀಕರಣ ಕೇಂದ್ರಗಳೂ ಜವಳಿ ಗಿರಣಿಗಳೂ ಪಿಂಗಾಣಿ ಮತ್ತು ಗಾಜಿನ ಕಾರ್ಖಾನೆಗಳೂ ಚರ್ಮ ಕೈಗಾರಿಕೆಗಳೂ ಫಿನ್ಲೆಂಡಿನಲ್ಲಿವೆ. ಬೀರ್, ವೋಡ್ಕ ಮುಂತಾದವೂ ತಯಾರಾಗುತ್ತವೆ.

	ಸಾರಿಗೆ : 1971ರಲ್ಲಿ ಫಿನ್ಲೆಂಡಿನಲ್ಲಿ ಒಟ್ಟು ಸುಮಾರು 73,600 ಕಿಮೀ. ಉದ್ದದ ರಸ್ತೆಗಳಿದ್ದುವು. ದೇಶದಲ್ಲಿ ಒಳ್ಳೆಯ ರಸ್ತೆ ವ್ಯವಸ್ಥೆಯುಂಟು. ಆದರೆ ಅಡ್ಡ ಬರುವ ಸರೋವರಗಳಿಂದಾಗಿ ರಸ್ತೆಗಳು ಬಳಸಾಗಿವೆ. ಆರ್ಕಾಟಕ್ ವೃತ್ರದ ಉತ್ತರಕ್ಕೆ ಕೆಲವೇ ರಸ್ತೆಗಳುಂಟು. ರೈಲುಮಾರ್ಗಗಳ ಉದ್ದ ಕೇವಲ 8,800 ಕಿಮೀ. ದೇಶದ ನೈಋತ್ಯ ಭಾಗದಲ್ಲಿ ಹೆಚ್ಚು ರೈಲು ಮಾರ್ಗಗಳಿವೆ. ರೈಲ್ವೆಗಳು ಸರ್ಕಾರದ ಒಡೆತನದಲ್ಲಿವೆ.

	ಫಿನ್ಲೆಂಡಿನಲ್ಲಿ 6400 ಕಿ.ಮೀ. ಒಳನಾಡಿನ ಜಲಮಾರ್ಗಗಳಿವೆ. ಕಡಿದ ಮರದ ದಿಮ್ಮಿಗಳನ್ನು ಸಾಗಿಸಲು ಅನುಕೂಲವಾದ ಜಲಮಾರ್ಗಗಳ ಉದ್ದ 41,600 ಕಿಮೀ. ಪ್ರತಿ ವರ್ಷ ಸುಮಾರು 1,20,000 ಹಡಗುಗಳೂ ಸುಮಾರು 19,000 ದಿಮ್ಮಿ ದೊಣಿಗಳೂ ಯಾನ ಮಾಡುತ್ತವೆ. ಸೈಮಾ ಸರೋವರದಿಂದ ಫಿನ್ಲೆಂಡ್ ಖಾರಿಗೆ ಸಂಪರ್ಕ ಕಲ್ಪಿಸುವ ಕಾಲುವೆಯ ಸೋನಿಯತ್ ದೇಶದ ಕಡೆಯ ಭಾಗವನ್ನು ಆ ದೇಶ 1963ರಲ್ಲಿ ಫಿನ್ಲೆಂಡಿಗೆ ಎರವಲಾಗಿ ನೀಡಿತು. 1903ರಲ್ಲಿ ಅದನ್ನು ಹಡಗು ಸಂಚಾರಕ್ಕೆ ತೆರೆಯಲಾಯಿತು. ಫಿನ್ಲೆಂಡಿನಿಂದ ಡೆನ್ಮಾರ್ಕ್, ಸ್ವೀಡನ್ ಮತ್ತು ಪೂರ್ವಜರ್ಮನಿಗೆ ಪ್ರಯಾಣಿಕರ ಹಡಗುಗಳು ಸಂಚರಿಸುತ್ತವೆ. ಫಿನ್ಲೆಂಡಿನಲ್ಲಿ ಹೆಲ್ಸಿಂಕಿಯಲ್ಲಲ್ಲದೆ ಇತರೆಡೆಗಳಲ್ಲಿ 16 ವಿಮಾನ ನಿಲ್ದಾಣಗಳಿವೆ. ಈನಾರೀ ಸರೋವರದ ದಡದಲ್ಲಿರುವ ಈವಾಲೋದಲ್ಲಿ ಫಿನ್ಲೆಂಡಿನ ಅತ್ಯಂತ ಉತ್ತರದ ವಿಮಾನ ನಿಲ್ದಾಣವಿದೆ.

ಸಂವಿಧಾನ, ಆಡಳಿತ, ಸಮಾಜ ವ್ಯವಸ್ಥೆ

ಸಂವಿಧಾನ: 1919ರಲ್ಲಿ ಫಿನ್ಲೆಂಡಿನ ಗಣರಾಜ್ಯ ಸಂವಿಧಾನ ಜಾರಿಗೆ ಬಂತಗು. ಏಕಸದನದಿಂದ ಕೂಡಿದ ಸಂಸತ್ತಿನಲ್ಲಿ (ಏಡುಸ್ಕುಂಟ) ನಾಲ್ಕು ವರ್ಷಗಳ ಅವಧಿಗೆ ಚುನಾಯಿತರಾದ 200 ಸದಸ್ಯರಿದ್ದಾರೆ. ಅಧ್ಯಕ್ಷನನ್ನು 6 ವರ್ಷಗಳಿಗೊಮ್ಮೆ ಆರಿಸಲಾಗುತ್ತದೆ. ಇವನ ಕೆಳಗೆ ರಾಜ್ಯ ಮಂಡಲಿ ಅಥವಾ ಸಂಪುಟ ಇದೆ. ಅದರ ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರಾಧ್ಯಕ್ಷನೇ ವಹಿಸುತ್ತಾನೆ. ಬಹುಪಕ್ಷಗಳಿರುವುದರಿಂದ ಸರ್ಕಾರ ಆಗಿಂದಾಗ್ಗೆ ಬದಲಾವಣೆ ಯಾದರೂ ಅಧ್ಯಕ್ಷನಿಂದಾಗಿ ಆಡಳಿತ ಸ್ಥಿರತೆ ಪ್ರಾಪ್ತವಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಅವನು ಉಸ್ತುವಾರಿ ಸರ್ಕಾರವನ್ನು ನೇಮಿಸಬಹುದು. ಸರ್ಕಾರದ ವಿಧೇಯಕಗಳನ್ನು ಅಧ್ಯಕ್ಷನ ಹೆಸರಿನಲ್ಲಿ ಮಂಡಿಸಲಾಗುತ್ತದೆ. ಅಧ್ಯಕ್ಷ ತನಗಿಷ್ಟವಿಲ್ಲದ ವಿಧೇಯಕಕ್ಕೆ ಸಹಿ ಹಾಕದೆ ತಿರಸ್ಕರಿಸಬಹುದು. ಆದರೆ ಅದು ಮತ್ತೆ ಸಂಸತ್ತಿನ ಅನುಮೋದನೆ ಪಡೆದರೆ ಅವನು ಸಹಿ ಹಾಕಲೇಬೇಕು. ಸಂಸತ್ತನ್ನು ವಿಸರ್ಜಿಸುವ ಅಧಿಕಾರ ಅಧ್ಯಕ್ಷನಿಗಿದೆ. ಅವನು ಸಶಸ್ತ್ರ ಬಲಗಳ ಮುಖ್ಯನಾಗಿರುತ್ತಾನೆ.

ಪ್ರಾದೇಶಿಕ ಮತ್ತು ಸ್ಥಳೀಯ ಸರ್ಕಾರ: ಆಡಳಿತದ ಅನುಕೂಲಕ್ಕಾಗಿ ಫಿನ್ಲೆಂಡನ್ನು 12 ಲಾನಿಟ್‍ಗಳಾಗಿ (ಪ್ರಾಂತ್ಯ) ವಿಂಡಿಸಲಾಗಿದೆ. ಪ್ರತಿ ಪ್ರಾಂತ್ಯಕ್ಕೂ ಒಬ್ಬ ರಾಜ್ಯಪಾಲನನು ಅಧ್ಯಕ್ಷ ನೇಮಿಸುತ್ತಾನೆ. ಪ್ರಾಂತ್ಯಗಳನ್ನು ಕಮ್ಯೂನ್‍ಗಳಾಗಿ ವಿಭಾಗ ಮಾಡಲಾಗಿದೆ. ಕಮ್ಯೂನ್ ಆಡಳಿತ ನಡೆಸಲು ಮಂಡಲಿಗಳಿಗೆ ನಾಲ್ಕು ವರ್ಷಗಳ ಅವಧಿಗೆ ಸದಸ್ಯರ ಆಯ್ಕೆಯಾಗುತ್ತದೆ.
ನ್ಯಾಯಾಂಗ: ಫಿನ್ಲೆಂಡಿನ ನ್ಯಾಯಾಂಗ ಸ್ವತಂತ್ರವಾದ್ದು. ನ್ಯಾಯಾಧೀಶರನ್ನು ನ್ಯಾಯಿಕ ತೀರ್ಪುಗಳಿಂದ ಮಾತ್ರ ತೆಗೆಯಬಹುದು. ಜಿಲ್ಲಾ ನ್ಯಾಯಾಲಯಗಳಿಂದ ಅಪೀಲು ವಿಚಾರಿಸಲು ಹೆಲ್ಸಿಂಕೀ, ಟುರ್ಕೂ, ವಾಸ ಮತ್ತು ಕ್ವೊಪೀಯೊದಲ್ಲಿ ಮೇಲರ್ಜಿ ನ್ಯಾಯಾಲಯಗಳುಂಟು. ಹೆಲ್ಸಿಕಿಯಲ್ಲಿ ಸರ್ವೋಚ್ಛ ನ್ಯಾಯಾಲಯವಿದೆ. ಮಹಾ ನ್ಯಾಯಾಧಿಪತಿ ಅತ್ಯಂತ ಉಚ್ಚ ನ್ಯಾಯಾಧಿಕಾರಿ. ಅವನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಕೆಲಸ ಮಾಡುತ್ತಾನೆ.

ಶಿಕ್ಷಣ: ಏಳರಿಂದ ಹದಿನಾಲ್ಕರವರೆಗೆ ಮಕ್ಕಳಿಗೆ ಶಾಲಾ ಶಿಕ್ಷಣ ಕಡ್ಡಾಯ. 10ರಿಂದ 13ನೆಯ ವಯಸ್ಸಿನೊಳಗೆ ಮಗು ಪ್ರೌಢ ಶಾಲೆಯನ್ನು ಪ್ರವೇಶಿಸಬಹುದು. ಪ್ರಾಥಮಿಕ ವಿದ್ಯಾಭ್ಯಾಸದ ಹೆಚ್ಚಿನ ಖರ್ಚನ್ನು ಸರ್ಕಾರ ವಹಿಸಿಕೊಳ್ಳುತ್ತದೆ. ಆದರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಿ ಮಾಡಲಾಗುವುದು. ಅನೇಕ ವೃತ್ತಿ ಶಿಕ್ಷಣ ಶಾಲೆಗಳಿವೆ. ಕಾರ್ಮಿಕ ಸಂಸ್ಥೆಗಳಲ್ಲಿ ವಯಸ್ಕರ ಶಿಕ್ಷಣದ ವ್ಯವಸ್ಥೆಯಿದೆ. ಹೆಲ್ಸಿಂಕೀ ವಿಶ್ವವಿದ್ಯಾಲಯ ಅತ್ಯಂತ ಹಳೆಯದು. 1640ರಲ್ಲಿ ಟುರ್ಕೂನಲ್ಲಿ ಸ್ಥಾಪಿತವಾದ ಇದನ್ನು 1828ರಲ್ಲಿ ಹೆಲ್ಸಿಂಕೀಗೆ ವರ್ಗಾಯಿಸಲಾಯಿತು. ಹೆಲ್ಸಿಂಕೀ ತಂತ್ರವಿಜ್ಞಾನ ಸಂಸ್ಥೆ 1849ರಲ್ಲಿ ಸ್ಥಾಪಿತವಾಯಿತು. ಜೂವಸ್ಕ್ಯೂಲ, ಆವುಲೂ, ಟ್ಯಾಂಪರೇಗಳಲ್ಲಿ ತಲಾ ಒಂದೊಂದು ಮತ್ತು ಟುರ್ಕೂದಲ್ಲಿ ಎರಡು ವಿಶ್ವವಿದ್ಯಾಲಯಗಳಿವೆ. ಟುರ್ಕೂದಲ್ಲಿರುವ ಎರಡು ವಿಶ್ವವಿದ್ಯಾಲಯಗಳ ಪೈಕಿ ಒಂದು ಸ್ವೀಡಿಷ್ ಭಾಷೆ ಆಡುವವರಿಗಾಗಿ, ಇನ್ನೊಂದು ಫಿನ್ನಿಷ್ ಭಾಷೆಯವರಿಗಾಗಿ.
ಆರೋಗ್ಯ, ಸಮಾಜಕಲ್ಯಾಣ: ಫಿನ್ಲೆಂಡಿನ ಸಾಮಾಜಿಕ ಭದ್ರತಾ ವ್ಯವಸ್ಥೆಯ ಅಂಗವಾಗಿ ನಿವೃತ್ತಿವೇತನ. ವೃದ್ಧರ ಕಲ್ಯಾಣ, ಕುಟುಂಬ ಕ್ಷೇಮ ಮತ್ತು ನಿರುದ್ಯೋಗ ಪರಿಹಾರ ಯೋಜನೆಗಳಿವೆ. 65 ಮತ್ತು ಹೆಚ್ಚು ವಯಸ್ಸಿನವರಿಗೆ ವೇತನ ನೀಡಲಾಗುವುದು. ಇದಕ್ಕಾಗಿ ಅವರು ತಮ್ಮ ದುಡಿಮೆಯ ಕಾಲದಲ್ಲಿ ಪ್ರೀಮಿಯಂ ಸಲ್ಲಿಸುತ್ತಾರೆ. ಅಲ್ಲದೆ ಉದ್ಯೋಗದಾತರು ಮತ್ತು ಪ್ರಾಂತೀಯ ಹಾಗೂ ಕೇಂದ್ರ ಸರ್ಕಾರಗಳಿಂದಲೂ ಇದಕ್ಕಾಗಿ ವಂತಿಗೆ ಸಲ್ಲುತ್ತದೆ. ಇತರರಿಗೂ ವೃದ್ಧಾಪ್ಯ ವೇತನ ವ್ಯವಸ್ಥೆಯಿದೆ.
ಆರೋಗ್ಯಾಭಿವೃದ್ಧಿ ಇಲಾಖೆ ವೃದ್ಧರ ಯೋಗಕ್ಷೇಮವನ್ನು ನೋಡಿಕೊಳ್ಳುವುದು. ಅವರಿಗಾಗಿ ಅನೇಕ ವಿಶ್ರಾಂತಿ ಗೃಹಗಳನ್ನು ತೆರೆದಿದೆ. ನಿರುದ್ಯೋಗ ಪರಿಹಾರ ಮತ್ತು ಕೈಗಾರಿಕಾ ಅಪಘಾತದ ಪರಿಹಾರಗಳನ್ನು ಒದಗಿಸಲಾಗಿದೆ. ಪ್ರಸವ ಕಾಲದ ನೆರವಿವ ವ್ಯವಸ್ಥೆಯನ್ನು 1937ರಲ್ಲಿ ಪ್ರಾರಂಭಿಸಲಾಯಿತು. 16ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕುಟುಂಬ ವೇತನ ನೀಡಲಾಗುತ್ತಿದೆ.

ಸಂಸ್ಕøತಿ, ಕಲೆ, ಸಾಹಿತ್ಯ, ಕ್ರೀಡೆ: ಫಿನ್ಲೆಂಡಿನ ರಾಷ್ಟ್ರೀಯ ಮಹಾಕಾವ್ಯ ಕಾಲೇವಾಲಾ. ಫಿನ್ಲೆಂಡಿನ ರಾಷ್ಟ್ರಾಭಿಮಾನವನ್ನು ಬೆಳೆಸಿದ ಕಾವ್ಯವಿದು. ಫಿನ್ನಿಷ್ ನಾಟಕ, ಸಂಗೀತ, ಸಾಹಿತ್ಯ, ವಾಸ್ತು ಶಿಲ್ಪ ಮತ್ತು ಕ್ರೀಡೆಗಳು ಇದರಿಂದ ಪ್ರಭಾವಿತವಾಗಿವೆ. ಹೆಲ್ಸಿಂಕೀ ಮುಂತಾದ ಅನೇಕ ಪಟ್ಟಣಗಳಲ್ಲಿ ನಾನಾ ಕಲಾಮೇಳಗಳು ನಡೆಯುತ್ತವೆ. ದೇಶದಲ್ಲಿ ಅನೇಕ ಕಲಾ ವಸ್ತು ಸಂಗ್ರಹಾಲಯಗಳು ಸ್ಥಾಪಿತವಾಗಿವೆ.	(ಕೆ.ಆರ್.)

ಇತಿಹಾಸ

ಫಿನ್ಲೆಂಡ್ ಕ್ರಿಸ್ತಶಕೆಯ ಆರಂಭದಿಂದ ಕ್ರಮಕ್ರಮವಾಗಿ ಸ್ವೀಡನ್ನಿನ ಪ್ರಭಾವಕ್ಕೆ ಒಳಗಾಯಿತು. ಸುಮಾರು 1154 ರಿಂದ 1809ರ ವರೆಗೆ ಇದು ಸ್ವೀಡನ್ನಿನ ಭಾಗವಾಗಿತ್ತು. ಅದರ ರಾಜಕೀಯ ಮತ್ತು ಸಾಂಸ್ಕøತಿಕ ಪ್ರಭಾವಕ್ಕೆ ಒಳಗಾಗಿತ್ತು. 1808ರಿಂದ 1917ರವರೆಗೆ ಇದು ರಷ್ಯನ್ ಅಧೀನದಲ್ಲಿತ್ತು. 1710ರಲ್ಲಿ ಪೀಟರ್ ಮಹಾಶಯ ಫಿನ್ಲೆಂಡನ್ನು ಗೆಲ್ಲಲು ಪ್ರಯತ್ನಪಟ್ಟು ಆರು ವರ್ಷಗಳ ಅನಂತರ ಇದನ್ನು ಆಕ್ರಮಿಸಿದ. ಇದರ ಪರಿಣಾಮವಾಗಿ ರಷ್ಯ ಮತ್ತು ಸ್ವೀಡನ್‍ಗಳ ನಡುವೆ ದೀರ್ಘ ಹೋರಾಟ ನಡೆಯಿತು. 1808ರಲ್ಲಿ ಸ್ವೀಡನ್ ಸೋತು ಫಿನ್ಲೆಂಡಿನ ಮೇಲೆ ರಷ್ಯನ್ ಪ್ರಭುತ್ವವನ್ನು ಒಪ್ಪಿಸಿಕೊಳ್ಳಬೇಕಾಯಿತು. 1917ರಲ್ಲಿ ರಷ್ಯದಲ್ಲಿ ಕ್ರಾಂತಿಯಾಗುವವರೆಗೂ ಫಿನ್ಲೆಂಡ್ ಅದರ ಅಧೀನದಲ್ಲಿತ್ತು. ಈ ಅವಧಿಯಲ್ಲಿ ರಷ್ಯನರು ತಮ್ಮ ಸಂಸ್ಕøತಿಯನ್ನು ಫಿನ್ಲೆಂಡಿನ ಜನತೆಯ ಮೇಲೆ ಹೇರಲು ಪ್ರಯತ್ನ ಪಟ್ಟರು. ಇದರಿಂದ ಅಲ್ಲಿ ರಾಷ್ಟ್ರೀಯ ಭಾವನೆ ಬೆಳೆದು ಸ್ವಾತಂತ್ರ್ಯದ ಬೇಡಿಕೆ ಹೆಚ್ಚಿತು. ಒಂದನೆಯ ಮಹಾಯುದ್ಧ ಮತ್ತು 1917ರ ಕ್ರಾಂತಿಯ ಸದವಕಾಶವನ್ನು ಉಪಯೋಗಿಸಿಕೊಂಡು ಫಿನ್ಲೆಂಡ್ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಸ್ವಲ್ಪ ಕಾಲ ಅಲ್ಲಿ ನಡೆದ ಅಂತರ್ಯುದ್ಧದಲ್ಲಿ ರಷ್ಯನರೂ ಜರ್ಮನವರೂ ಕೈ ಹಾಕಿದ್ದರು.

1919ರಲ್ಲಿ ಫಿನ್ಲೆಂಡ್ ಗಣರಾಜ್ಯವಾಯಿತು. 1919ರಿಂದ 1939ರ ವರೆಗಿನ ಕಾಲದಲ್ಲಿ ಅಲ್ಲಿ ಸಮಾಜವಾದಿ ಜನತಂತ್ರಾತ್ಮಕ ಪಕ್ಷ ಆಡಳಿತ ನಡೆಸುತ್ತಿತ್ತು. ಎರಡು ಮಹಾಯುದ್ಧಗಳ ನಡುವಣ ಕಾಲದಲ್ಲಿ ಫಿನ್ಲೆಂಡಿನಲ್ಲಿದ್ದ ದೊಡ್ಡ ದೊಡ್ಡ ಭೂಹಿಡುವಳಿಗಳನ್ನು ಒಡೆಯಲಾಯಿತು. ಹೊಸ ಭೂಮಿಯನ್ನು ಕೃಷಿಗೆ ಒಳಪಡಿಸಿ ಫಿನ್ಲೆಂಡನ್ನು ಕೃಷಿಕ ಮಾಲೀಕರ ರಾಷ್ಟ್ರವನ್ನಾಗಿ ಪರಿವರ್ತಿಸಲಾಯಿತು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಫಿನ್ಲೆಂಡ್ ಸೋವಿಯತ್ ಆಕ್ರಮಣಕ್ಕೆ ಒಳಗಾಗಿತ್ತು. 1940ರ ಒಪ್ಪಂದದ ಪ್ರಕಾರ ಫಿನ್ಲೆಂಡ್ ತನ್ನ ಭುಮಿಯ ಒಂದು ಭಾಗವನ್ನು ಸೋವಿಯತ್ ದೇಶಕ್ಕೆ ಬಿಟ್ಟುಕೊಟ್ಟಿತು. ಜರ್ಮವರು ಸೋವಿಯತ್ ದೇಶದ ಮೇಲೆ ಆಕ್ರಮಣ ನಡೆಸಿದಾಗ ಫಿನ್ಲೆಂಡ್ ಅವರ ಜೊತೆ ಸೇರಿ ಸೋವಿಯಿತ್ ದೇಶದ ವಿರುದ್ಧ ಹೋರಾಡಿತು. ಇದರ ಪರಿಣಾಮವಾಗಿ ಮಿತ್ರ ರಾಷ್ಟ್ರಗಳು ಫಿನ್ಲೆಂಡಿನ ಮೇಲೆ ಯುದ್ಧ ಘೋಷಿಸಿದ್ದುವು. ಸೋವಿಯತ್ ದೇಶ ಫಿನ್ಲೆಂಡನ್ನು ಪೂರ್ಣವಾಗಿ ಸೋಲಿಸಿತು. ಅದು ಸೋವಿಯತ್ ದೇಶ ವಿಧಿಸಿದ ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು. ಯುದ್ಧ ಕಾಲದಲ್ಲಿ ನಿರಾಶ್ರಿತರಾದ ಜನರಿಗೆ ಪುನರ್ವಸತಿ ಕಲ್ಪಿಸುವುದರಲ್ಲಿ ಮತ್ತು ಸೋವಿಯತ್ ದೇಶಕ್ಕೆ ಯುದ್ಧ ನಷ್ಟದ ಪರಿಹಾರ ಕೊಡುವುದರಲ್ಲಿ ಫಿನ್ಲೆಂಡ್ 1944ರಿಂದ 1953ರ ವರೆಗೆ ಮಗ್ನವಾಗಿತ್ತು. 1953ರ ವೇಳೆಗೆ ಈ ಸಮಸ್ಯೆಗಳು ಬಗೆಹರಿದು, ಫಿನ್ಲೆಂಡ್ ಆಂತರಿಕ ಪ್ರಗತಿಯತ್ತ ಗಮನ ಹರಿಸಲು ಪ್ರಾರಂಭಿಸಿತ್ತು. 1955ರಲ್ಲಿ ಫಿನ್ಲೆಂಡಿಗೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿತು.	(ಎಚ್.ಆರ್.)

ಶಿಕ್ಷಣ ಪದ್ಧತಿ: ಹದಿನಾಲ್ಕನೆಯ ಶತಮಾನದ ಮಧ್ಯಕಾಲದಿಂದಲೂ ಫಿನ್ಲೆಂಡ್ ಸ್ವೀಡನ್ನಿನ ಆಡಳಿತಕ್ಕೆ ಒಳಪಟ್ಟದ್ದು 1909ರಲ್ಲಿ ರಷ್ಯದ ಆಡಳಿತಕ್ಕೆ ಬಂತು. ಈ ಕಾರಣದಿಂದ ಫಿನಿಷ್, ಸ್ವೀಡಿಷ್ ಮತ್ತು ರಷ್ಯನ್ ಭಾಷೆಗಳು ಇಲ್ಲಿ ಬಳಕೆಗೆ ಬಂದು ಆ ಮೂರು ಭಾಷೆಗಳಿಗೂ ಶಿಕ್ಷಣಕ್ಷೇತ್ರದಲ್ಲಿ ಸ್ಥಾನ ಕಲ್ಪಿಸಬೇಕಾದ ಅಗತ್ಯ ಉಂಟಾಗಿದೆ. ಜೊತೆಗೆ, ಆಧುನಿಕ ವ್ಯಾವಹಾರಿಕ ಭಾಷೆಗಳಿಗೂ ಅವಕಾಶ ಕಲ್ಪಿಸಬೇಕಾಗಿದೆ. ಹೀಗಿದ್ದರೂ ಇತರ ಪಾಶ್ಚಾತ್ಯ ಮತ್ತು ಪೌರಸ್ತ್ಯ ರಾಷ್ಟ್ರಗಳೊಡನೆ ಹೋಲಿಸಿ ನೋಡಿದರೆ ಇಲ್ಲಿನ ಪಠ್ಯಕ್ರಮದಲ್ಲಿ ಸಾಮಾನ್ಯ ವಿಷಯಗಳಿಗೆ ಅತಿ ಹೆಚ್ಚಿನ ಅವಕಾಶ ಕಲ್ಪಿಸಿರುವುದು ಕಂಡುಬರುತ್ತದೆ.

ಹತ್ತೊಂಬತ್ತನೆಯ ಶತಮಾನದಲ್ಲಿ ಮಧ್ಯಕಾಲದವರೆಗೂ ಫಿನ್ಲೆಂಡಿನ ಶಿಕ್ಷಣ ಚರ್ಚಿನ ವಶದಲ್ಲಿತ್ತು. ಅದರಿಂದ ಲ್ಯಾಟಿನ್ ಭಾಷೆ ಶಿಕ್ಷಣರಂಗದಲ್ಲಿ ಬೋಧನ ಭಾಷೆಯಾಗಿ ಬಳಕೆಯಲ್ಲಿತ್ತು. ಕೇವಲ ಪುರೋಹಿತ ವರ್ಗದವರಿಗೆ ಶಿಕ್ಷಣವೀಯುವುದೇ ಮುಖ್ಯ ಉದ್ದೇಶವಾಗಿದ್ದ ಅಂದಿನ ಶಿಕ್ಷಣ ಸಂಸ್ಥೆಗಳಲ್ಲಿ ಲ್ಯಾಟಿನ್ ಭಾಷೆ ಅಗತ್ಯವೆನಿಸಿದ್ದರೂ ಸರ್ಕಾರ ಶಿಕ್ಷಣದ ಹೊಣೆಗಾರಿಕೆ ವಹಿಸಿಕೊಂಡಂತೆ ಸ್ವೀಡಿಷ್ ಮತ್ತು ಫಿನಿಷ್ ಭಾಷೆಗಳು ಬೋಧನಾಮಾದ್ಯಮವಾಗುತ್ತ ಬಂದುವು. ಕಳೆದ ಶತಮಾನದ ಏಳನೆಯ ದಶಕದಲ್ಲಿ ಇಲ್ಲಿನ ಸರ್ಕಾರ ದೇಶಾದ್ಯಂತ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿತು. ಅದು ತನಕ ಚರ್ಚುಗಳ ಆಡಳಿತಕ್ಕೊಳಪಟ್ಟಿದ್ದ ಪ್ರೌಢಶಿಕ್ಷಣವನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಂಡಿತು. ಜೊತೆಗೆ ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ನೆರವಾಗುವಂತೆ ತಾಂತ್ರಿಕ ಮತ್ತು ವೃತ್ತಿಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಲಾರಂಭಿಸಿತು. ಆ ಕಾಲದಲ್ಲಿ ಯುರೋಪಿನಲ್ಲಿ ಕೀರ್ತಿಗಳಿಸಿದ್ದ ಜರ್ಮನ್ ಶಿಕ್ಷಣಪದ್ಧತಿ ಕ್ರಮ ಕ್ರಮವಾಗಿ ಇಲ್ಲಿನ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತ ಬಂತು. 1968ರಲ್ಲಿ ಇಲ್ಲಿನ ಶಿಕ್ಷಣ ಪುನವ್ರ್ಯವಸ್ಥೆಗೊಂಡು ಪ್ರಾಥಮಿಕ, ಪ್ರೌಢ ಮತ್ತು ವೃತ್ತಿಶಿಕ್ಷಣ ಸಂಸ್ಥೆಗಳು ಪ್ರತ್ಯೇಕ ಅಸ್ತಿತ್ವವನ್ನು ಪಡೆದುವು. ಜೊತೆಗೆ ಈ ಮೂರು ಕ್ಷೇತ್ರದಲ್ಲೂ ಸಮಾಂತರ ಸಂಸ್ಥೆಗಳನ್ನು ಆರಂಭಿಸುವ ಕಾರ್ಯ ಮೊದಲಾಯಿತು.

ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದಲ್ಲಿ ಆರಂಭವಾದ ರಾಷ್ಟ್ರೀಯ ಶಿಕ್ಷಣಮಂಡಲಿ ರಾಜ್ಯದ ಶಿಕ್ಷಣ ಸಚಿವಾಲಯಕ್ಕೆ ಜವಾಬ್ದಾರಿಯಾಗಿದ್ದು ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಅಧ್ಯಾಪಕರ ವೃತ್ತಿ ಶಿಕ್ಷಣ ಸಂಸ್ಥೆಗಳ ಆಡಳಿತ ಮತ್ತು ಮೇಲ್ವಿಚಾರಣೆಯನ್ನು ನಡೆಸಿಕೊಂಡುಬರುತ್ತಿದೆ. ಗ್ರಂಥಾಲಯಗಳೂ ಅದರ ಆಡಳಿತಕ್ಕೇ ಸೇರಿವೆ. ಸರ್ಕಾರ ಸ್ಥಾಪಿಸಿರುವ ವಿಶ್ವವಿದ್ಯಾಲಯಗಳಿಗೆ ಮತ್ತು ಮೇಲ್ವಿಚಾರಣೆ ಶಿಕ್ಷಣ ಸಚಿವರಿಗೆ ಸೇರಿದ್ದರೂ ವಿಶ್ವವಿದ್ಯಾಲಯಗಳಿಗೆ ತಕ್ಕಷ್ಟು ಆಂತರಿಕ ಸ್ವಾಯತ್ತತೆ ಇದೆ. ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಗಳ ಆಡಳಿತವನ್ನು ವಾಣಿಜ್ಯ ಮತ್ತು ಉದ್ಯೋಗ ಸಚಿವಾಲಯದ ನೇತೃತ್ವದಲ್ಲಿ, ವೃತ್ತಿಶಿಕ್ಷಣದ ಕೇಂದ್ರ ಮಂಡಲಿ ನಡೆಸುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತದಲ್ಲಿ ಸಲಹೆ ನೀಡಲು ಸ್ಥಳೀಯ ಸಲಹಾಮಂಡಲಿಗಳು ಏರ್ಪಟ್ಟಿವೆ. ರಾಷ್ಟ್ರದ 12 ಪ್ರಾಂತ್ಯಗಳಲ್ಲೂ ಒಂದೊಂದು ಪ್ರಾಂತೀಯ ಶಿಕ್ಷಣ ಮಂಡಲಿಯನ್ನು 1970ರಲ್ಲಿ ಆರಂಭಿಸಿ ಅವಕ್ಕೂ ಶಿಕ್ಷಣದ ಆಡಳಿತದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಶಿಕ್ಷಣ ಸಚಿವಾಲಯ ಶಿಕ್ಷಣಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸಿದ್ಧಪಡಿಸಿ ಸಂಸತ್ತಿನ ಅಂಗೀಕಾರಕ್ಕಾಗಿ ಇಡುತ್ತದೆ. ಅದು ನಿರ್ಧರಿಸಿದ ನೀತಿಗೆ ಅನುಗುಣವಾಗಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಾಚರಣೆಗೆ ಅಗತ್ಯವಾದ ನಿಯಮಗಳನ್ನು ರೂಪಿಸುತ್ತದೆ. ಹಣಕಾಸಿನ ವ್ಯವಸ್ಥೆ, ಸಿಬ್ಬಂದಿಯ ನೇಮಕ-ಈ ವಿಷಯದಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿ ಆಚರಣೆಗೆ ತರುತ್ತದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಶಿಕ್ಷಣಕ್ಷೇತ್ರದ ಹಿರಿಯ ಅಧಿಕಾರಿಗಳನ್ನು ಸಚಿವಾಲಯ ನೇಮಕ ಮಾಡಿದರೂ ಅದಕ್ಕೆ ರಾಷ್ಟ್ರಾಧ್ಯಕ್ಷರ ಅನುಮೋದನೆ ಪಡೆಯಬೇಕಾಗುತ್ತದೆ. ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ 1970ರವರೆಗೂ ಅವುಗಳ ಒಟ್ಟು ವೆಚ್ಚ ಪ್ರತಿಶತ 78ರಷ್ಟು ಧನವನ್ನು ಸರ್ಕಾರ ನೀಡುತ್ತಿತ್ತು. ಈಚೆಗೆ ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಚಾಲ್ತಿ ಖರ್ಚಿನ 85ರಷ್ಟು ಹಣವನ್ನು ಒದಗಿಸುತ್ತಿದೆ.

ಇಲ್ಲಿನ ಶಿಕ್ಷಣ ನಾಲ್ಕು ಅಂತಸ್ತುಗಳಲ್ಲಿ ಏರ್ಪಟ್ಟಿದೆ-ಪ್ರಾಥಮಿಕ ಪೂರ್ವದ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಪ್ರೌಢ ಮತ್ತು ಉನ್ನತ ಶಿಕ್ಷಣ. ಪ್ರಾಥಮಿಕ ಪೂರ್ವದ ಶಿಕ್ಷಣ ಸರ್ಕಾರದ ನೇರ ಹೊಣೆಗಾರಿಕೆಗೆ ಸೇರಿಲ್ಲವಾದರೂ ಅವನ್ನು ನಡೆಸತಕ್ಕವರಿಗೆ ಧನಸಹಾಯ ನೀಡುತ್ತದೆ. ಈ ಮಟ್ಟದ ಶಾಲೆಗಳನ್ನು ಪೌರಸಭೆ, ಕಾರ್ಖಾನೆ, ಸಂಘಸಂಸ್ಥೆಗಳು ನಡೆಸುವುದರ ಜೊತೆಗೆ ಖಾಸಗಿ ವ್ಯಕ್ತಿಗಳೂ ನಡೆಸುತ್ತಿದ್ದಾರೆ.

1950ರಿಂದೀಚೆಗೆ ಪ್ರಾಥಮಿಕ ಶಿಕ್ಷಣ ಎರಡು ಅಂತಸ್ತುಗಳಾಗಿ ವಿಭಾಗವಾಗಿದೆ-ಆರು ವರ್ಷದ ಪ್ರಾಥಮಿಕ ಶಾಲೆ ಮತ್ತು ಎರಡು ವರ್ಷದ ಸಿವಿಕ್ ಶಾಲೆ-ಹೀಗೆ ಮಾನಸಿಕ ಅಥವಾ ದೈಹಿಕ ನ್ಯೂನತೆಯುಳ್ಳ ಮಕ್ಕಳಿಗಾಗಿ ವಿಶೇಷ ರೀತಿಯ ಪ್ರಾಥಮಿಕ ಶಾಲೆಗಳು ಸಹ ಏರ್ಪಟ್ಟಿವೆ.

ಕಾನೂನು ಪ್ರಕಾರ 7-16 ವರ್ಷ ವಯೋಮಿತಿಯ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿದ್ದರೂ ಆ ವಯೋಮಾನದ ಬಹುತೇಕ ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ.
ಪ್ರಾಥಮಿಕ ಶಾಲೆಯ ನಾಲ್ಕನೆಯ ತರಗತಿಯ ಶಿಕ್ಷಣ ಮುಗಿಸಿದ ಮಕ್ಕಳು ಪ್ರೌಢಶಾಲೆಯ ಪ್ರವೇಶ ಪರೀಕ್ಷೆಗೆ ಕೂಡಬಹುದು. ಅದರಲ್ಲಿ ಉತ್ತೀರ್ಣರಾದವರು ಪ್ರೌಢಶಾಲೆಗೆ ಸೇರಬಹುದು. ಆ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತೆರಡು ಸಾರಿ ಪ್ರಯತ್ನಿಸಲು ಅವಕಾಶವುಂಟು ಹಾಗೂ ಉತ್ತೀರ್ಣರಾಗದವರು ಪ್ರಾಥಮಿಕ ಹಾಗೂ ಸಿವಿಕ್ ಶಾಲೆಗಳಲ್ಲಿದ್ದು ಅನಂತರ ಉದ್ಯೋಗ ಶಿಕ್ಷಣಕ್ಕೆ ಸೇರಬೇಕಾಗುತ್ತದೆ. ಪ್ರಾಥಮಿಕ ಶಾಲೆಯ ಸುಮಾರು ಅರ್ಧದಷ್ಟು ಮಂದಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೌಢಶಾಲೆಯನ್ನು ಪ್ರವೇಶಿಸುತ್ತಾರೆ.

ಪ್ರಾಥಮಿಕ ಶಾಲೆಯ ಪಠ್ಯಕ್ರಮವನ್ನು ಪ್ರತಿವರ್ಷ ಆರಂಭದ ಆಯಾ ಶಾಲೆಯ ಮುಖ್ಯೋಪಾಧ್ಯಾಯರೇ ತಯಾರಿಸಿ ಶಾಲಾ ತನಿಖಾಧಿಕಾರಿಯ ಅನುಮೋದನೆ ಪಡೆಯುತ್ತಾರೆ. ಮತಧರ್ಮ, ಜೀವವಿಜ್ಞಾನ, ಭೂಗೋಳ ಆರೋಗ್ಯಶಾಸ್ತ್ರ, ಚರಿತ್ರೆ, ಪರಭಾಷೆ, ಗಣಿತ, ಚಿತ್ರಲೇಖನ, ಸಂಗೀತ, ದೈಹಿಕ ಶಿಕ್ಷಣ, ಕೈಕಸಬು-ಇವು ಪಠ್ಯಕ್ರಮದಲ್ಲಿ ಸೇರಿರುತ್ತವೆ. ಸಿವಿಕ್ ಶಾಲೆಯ ಪಠ್ಯಕ್ರಮದಲ್ಲಿ ಮತಧರ್ಮ ಫಿನಿಷ್ ಅಥವಾ ಸ್ವೀಡಿಸ್ ಭಾಷೆ ಮತ್ತು ಸಾಹಿತ್ಯ, ಗೃಹ ಅರ್ಥಶಾಸ್ತ್ರ, ಗ್ರಾಮೀಣ ಅರ್ಥಶಾಸ್ತ್ರ, ಮರಗೆಲಸ, ಲೋಹ, ಕೆಲಸ, ಯಂತ್ರಶಾಸ್ತ್ರ, ಆರೋಗ್ಯಶಾಸ್ತ್ರ, ಗಣಿತ, ಸಂಗೀತ, ದೈಹಿಕಶಿಕ್ಷಣ, ಶಿಶುಪೋಷಣೆ ಮತ್ತು ವಾಣಿಜ್ಯ ವಿಷಯಗಳು (ನಗರದ ಶಾಲೆಗಳಲ್ಲಿ ಮಾತ್ರ)-ಇವು ಸೇರಿರುತ್ತವೆ. ಬೋಧನೆ ಕ್ರಮ ತೀರ ಹಳೆಯ ಅಧ್ಯಾಪಕ ಕೇಂದ್ರ (ಟೀಚರ್-ಸೆಂಟರ್ಡ್) ರೀತಿಯದಾಗಿರುತ್ತದೆ. ಆದರೆ ಬಳಕೆಯಲ್ಲಿರುವ ಆಧುನಿಕ ಪಾಠೋಪಕರಣಗಳನ್ನು ಉಪಯೋಗಿಸಲಾಗುತ್ತದೆ.
ಪ್ರೌಢಶಿಕ್ಷಣ ಎರಡು ಅಂತಸ್ತಿನಲ್ಲಿ ಏರ್ಪಟ್ಟಿದೆ-ನಗರ ಸಭೆಗಳು ನಡೆಸುತ್ತಿರುವ ಜೂನಿಯರ್ ಪ್ರೌಢಶಾಲೆಗಳಲ್ಲಿ. ಸರ್ಕಾರ ಹಾಗೂ ಕೆಲವು ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಸೀನಿಯರ್ ಪ್ರೌಢಶಾಲೆಗಳಲ್ಲಿ. ಪ್ರಾಥಮಿಕ ನಾಲ್ಕನೆಯ ತರಗತಿ ಮುಗಿಸಿದವರು 5 ವರ್ಷಗಳ ಕಾಲ ವ್ಯಾಸಂಗ ಮಾಡಬೇಕು. ಆರು ವರ್ಷದ ಪ್ರಾಥಮಿಕ ಶಿಕ್ಷಣ ಮುಗಿಸಿದರೂ ಅಲ್ಲಿ ಮೊದಲನೆಯ ತರಗತಿಗೆ ಸೇರಬೇಕು. ರಾಜ್ಯ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ನಡೆಸುವ ಸೀನಿಯರ್ ಶಾಲೆಯಲ್ಲಿ ವಿದ್ಯಾರ್ಥಿಗಳು ಆಧುನಿಕ ಅಥವಾ ಅಭಿಜಾತ (ಕ್ಲಾಸಿಕಲ್) ವಿಭಾಗದ ಪಠ್ಯಕ್ರಮವನ್ನು ಆರಿಸಿಕೊಳ್ಳಬಹುದು. ಈ ಮಟ್ಟದಲ್ಲಿ ಬಾಲಕ ಬಾಲಕಿಯರಿಗೆ ಶಾಲೆಗಳು ಪ್ರತ್ಯೇಕವಾಗಿವೆ. ಈಚೆಗೆ ಆರಂಭವಾಗುತ್ತಿರುವ ಶಾಲೆಗಳು ಆರ್ಥಿಕ ಕಾರಣದಿಂದಾಗಿ ಸಹಶಿಕ್ಷಣವನ್ನು ಒದಗಿಸುತ್ತಿವೆ.

ರಾಜ್ಯಸರ್ಕಾರದ ಪ್ರೌಢಶಾಲೆಗಳ ಪಠ್ಯಕ್ರಮದಲ್ಲಿ ಅಷ್ಟಾಗಿ ವೈವಿಧ್ಯ ಕಂಡುಬರುತ್ತಿಲ್ಲ. ಅದನ್ನು ಸರ್ಕಾರವೇ ನಿಗದಿ ಮಾಡಿರುತ್ತದೆ. ಆದರೆ ಖಾಸಗಿ ಶಾಲೆಗಳ ಪಠ್ಯಕ್ರಮದಲ್ಲಿ ವೈವಿಧ್ಯ ಕಂಡುಬರುವುದಲ್ಲದೆ ಅದರ ನಿರೂಪಣೆಯಲ್ಲಿ ಶಾಲೆಗೆ ತಕ್ಕಷ್ಟು ಸ್ವಾತಂತ್ರ್ಯವಿತುತ್ತದೆ. ಆ ಶಾಲೆಗಳ ಪಠ್ಯಕ್ರಮವನ್ನು ಮುಖ್ಯವಾಗಿ ಶಾಲಾ ಆಂತಿಮ ಪರೀಕ್ಷೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗುತ್ತಿದೆ. ಅದರಲ್ಲಿ ಫಿನಿಷ್, ಸ್ವೀಡಿಷ್ ಭಾಷೆಗಳ ಒಂದು ಆಧುನಿಕ ಪರಭಾಷೆ, ಗಣಿತ-ಇವು ಎಲ್ಲರಿಗೂ ಸಾಮಾನ್ಯವಾಗಿರುವ ವ್ಯಾಸಂಗ ವಿಷಯಗಳು. ಮತಧರ್ಮ, ಫಿನಿಷ್, ಅಥವಾ ಸ್ವೀಡಿಷ್, ಭಾಷೆ, ಚರಿತ್ರೆ, ಸಮಾಜಶಾಸ್ತ್ರ ಅಥವಾ ಅರ್ಥಶಾಸ್ತ್ರ, ಮನಶ್ಶಾಸ್ತ್ರ, ತತ್ತ್ವಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಎರಡು ಆಧುನಿಕ ಪರಭಾಷೆಗಳು (ಇಂಗ್ಲೀಷ್, ಫ್ರೆಂಚ್, ಜರ್ಮನ್, ರಷ್ಯನ್-ಇವುಗಳಲ್ಲಿ ಯಾವುದಾದರೂ ಎರಡು) ದೈಹಿಕ ಶಿಕ್ಷಣ, ಸಂಗೀತ, ಕುಶಲಕಲೆ, ಗಣಿತ ಮುಂತಾದ ವಿಷಯಗಳಲ್ಲಿ ತರಬೇತು ನೀಡಲಾಗುವುದು. ಉನ್ನತ ಶಿಕ್ಷಣಕ್ಕೆ ಹೋಗತಕ್ಕವರಿಗೂ ಸರ್ಕಾರದ ಮೇಲ್ದರ್ಜೆಯ ಹುದ್ದೆಗಳಿಗೆ ಸೇರತಕ್ಕವರಿಗೂ  ಮೆಟ್ರಿಕ್ಯೂಲೇಷನ್ ಅಥವಾ ಪ್ರೌಢಶಾಲೆಯ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಾಗುತ್ತದೆ. ಆ ಪರೀಕ್ಷೆಗೆ ಕೂಡುವವರಲ್ಲಿ ಪ್ರತಿಶತ 80-85ರಷ್ಟು ಮಂದಿ ಉತ್ತೀರ್ಣರಾಗುತ್ತಾರೆ. ಆ ಬಗ್ಗೆ ಉತ್ತೀರ್ಣರಾದವರಿಗೆ ಡಿಪ್ಲೊಮ ಅಥವಾ ಪ್ರಶಸ್ತಿ ಪತ್ರ ನೀಡಲಾಗುವುದು.

ಉನ್ನತ ಶಿಕ್ಷಣ 1640ರಲ್ಲಿ ಆರಂಭವಾದ ಒಂದು ವಿಶ್ವವಿದ್ಯಾಲಯವನ್ನು ಒಳಗೊಂಡಂತೆ ದೇಶದ 6 ವಿಶ್ವವಿದ್ಯಾಲಯಗಳಲ್ಲೂ ಅಧ್ಯಾಪಕರ ತರಬೇತಿ ಕಾಲೇಜು, ಅರ್ಥಶಾಸ್ತ್ರದ ಉನ್ನತ ವಿದ್ಯಾಲಯ, ಉನ್ನತ ವಾಣಿಜ್ಯ ವಿದ್ಯಾಲಯ, ಪಶುವೈದ್ಯ ಕಾಲೇಜು ಮತ್ತು ಪಾಲಿಟಿಕ್ನಿಕ್ಕುಗಳಲ್ಲಿ ಏರ್ಪಟ್ಟಿದೆ. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರೆಲ್ಲ ವಿಶ್ವವಿದ್ಯಾಲಯ ಅಥವಾ ಇತರ ಉನ್ನತ ಶಿಕ್ಷಣ ಸಂಸ್ಥೆಗೆ ಸೇರುವ ಹಕ್ಕು ಪಡೆದಿದ್ದರೂ ಸ್ಥಳಾಭಾವದಿಂದ ಹೆಚ್ಚು ಅಂಕ ಪಡೆದವರನ್ನು ಮಾತ್ರ ಚಯನಾತ್ಮಕ ಪ್ರವೇಶ (ಸೆಲೆಕ್ಟಿವ್ ಅಡ್‍ಮಿಷನ್) ರೀತ್ಯ ಸೇರಿಸಿಕೊಳ್ಳಲಾಗುತ್ತದೆ. ಬ್ಯಾಚಲರ್ ಪದವಿ ಪರೀಕ್ಷೆ 3-4 ವರ್ಷ ಅವಧಿಯದು. ಮಾಸ್ಟರ್ ಪದವಿ ಪರೀಕ್ಷೆ 1-2 ವರ್ಷ ಅವಧಿಯದು. ಲೈಸೆಂಷಿಯೇಟ್ ಪದವಿ 2 ವರ್ಷ ಅವಧಿಯದು. ಅನಂತರ ಡಾಕ್ಟರ್ ಪದವಿ 1-2 ವರ್ಷ ಅವಧಿಯದು. ಸಾಹಿತ್ಯ, ಧರ್ಮಶಾಸ್ತ್ರ, ನ್ಯಾಯಶಾಸ್ತ್ರ, ವಾಣಿಜ್ಯಶಾಸ್ತ್ರ ನಿಸರ್ಗ ವಿಜ್ಞಾನಗಳು ಕೃಷಿವಿಜ್ಞಾನ, ತಾಂತ್ರಿಕ ವಿಜ್ಞಾನ, ವೈದ್ಯಶಾಸ್ತ್ರ-ಇವು ಉನ್ನತ ಶಿಕ್ಷಣದಲ್ಲಿ ಪ್ರಮುಖ ವ್ಯಾಸಂಗ ವಿಷಯಗಳು. ಮುಖ್ಯವಾಗಿ ಉಪನ್ಯಾಸರೂಪದ ಬೋಧನ ಕ್ರಮ ಪ್ರಚಾರದಲ್ಲಿದೆ.

	ಸರ್ಕಾರ ಅಥವಾ ಕಮ್ಯೂನುಗಳು ನಡೆಸುತ್ತಿರುವ ಶಾಲೆಗಳು ಕಡ್ಡಾಯ ಶಿಕ್ಷಣ ಉದ್ಯೋಗ ಶಿಕ್ಷಣ ಮುಗಿಸಿದವರನ್ನು ಸೇರಿಸಿಕೊಳ್ಳುತ್ತವೆ. ನೇರವಾಗಿ ಉದ್ಯೋಗವೊಂದರಲ್ಲಿ ಕೆಲಸಕ್ಕೆ ಸೇರಲು ಅನುಕೂಲಿಸುವಂತೆ ಎರಡು ವರ್ಷದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣಗಳೆರಡರಲ್ಲೂ ಅವರಿಗೆ ಶಿಕ್ಷಣವೀಯುತ್ತವೆ. ಜೊತೆಗೆ ಮಾನಸಿಕ ಹಾಗೂ ದೈಹಿಕನ್ಯೂನತೆಯುಳ್ಳವರ ಉದ್ಯೋಗ ಶಿಕ್ಷಣಕ್ಕೆ ವಿಶೇಷ ಸಂಸ್ಥೆಗಳು ಆಸ್ತಿತ್ವದಲ್ಲಿವೆ. ಈ ಎಲ್ಲ ಸಂಸ್ಥೆಗಳೂ ದೇಶದ ವಿವಿಧ ಉದ್ಯೋಗಗಳಿಗೆ ಕೆಲಸಗಾರರನ್ನು ಒದಗಿಸುವ ಉದ್ದೇಶದಿಂದ ಏರ್ಪಟ್ಟಿರುವುದರಿಂದ ಅಲ್ಲಿನ ಪಠ್ಯಕ್ರಮದಲ್ಲಿ ತುಂಬ ವೈವಿಧ್ಯ ಕಂಡುಬರುತ್ತದೆ.

	ಉಮೇದುವಾರಿ ಶಿಕ್ಷಣ, ವ್ಯವಹಾರ ಶಿಕ್ಷಣ, ತಾಂತ್ರಿಕ ಶಿಕ್ಷಣ, ವಾಣಿಜ್ಯ ಶಾಸ್ತ್ರ, ನೌಕೌಶಾಸ್ತ್ರ ಕೃಷಿ ವಿಜ್ಞಾನ-ಮುಂತಾದವಕ್ಕೆ ಶಾಲಾ ಮತ್ತು ಕಾಲೇಜು ಮಟ್ಟದ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿಗೆ ಮೆಟ್ರಿಕ್ಯುಲೇಷನ್ ಮುಗಿಸದವರನ್ನೂ ಸೇರಿಸಿಕೊಳ್ಳುವ ಸೌಲಭ್ಯವುಂಟು.

	ತಾಂತ್ರಿಕಶಾಲೆಗಳ ಪಠ್ಯಕ್ರಮದಲ್ಲಿ ತತ್ತ್ವಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಫಿನಿಷ್ ಮತ್ತು ಆಧುನಿಕ ಪರಭಾಷೆ ಮುಂತಾದ ಸಾಮಾನ್ಯ ವಿಷಯಗಳೂ ತಾಂತ್ರಿಕ ನಕ್ಷಾರಚನೆ, ಸಂಖ್ಯಾಶಾಸ್ತ್ರ, ಯಂತ್ರಜ್ಞಾನ, ಯಂತ್ರ ಉದ್ಯೋಗವಿಜ್ಞಾನ ಮುಂತಾದ ಔದ್ಯೋಗಿಕ ವಿಷಯಗಳೂ ಸೇರಿರುತ್ತವೆ. ವಿಶಿಷ್ಟರೀತಿಯ ಉದ್ಯೋಗಗಳಿಗೆ ಆ ಉದ್ಯೋಗದ ಆಚರಣೆಯಂತೆ ಅದರ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ, ಕಾರ್ಮಿಕರ ಶಾಸನ, ಉದ್ಯೋಗಗಳ ಹಣಕಾಸಿನ ವ್ಯವಹಾರ ಮುಂತಾದ ಅಂಶಗಳಲ್ಲೂ ಶಿಕ್ಷಣವೀಯಲಾಗುವುದು. ವಾಣಿಜ್ಯ ಶಾಲೆಯ ಪಠ್ಯಕ್ರಮದಲ್ಲಿ ವಾಣಿಜ್ಯ ಸಿದ್ಧಾಂತ, ಕಾರ್ಯಾಲಯದ ಕಾರ್ಯನಿರ್ವಹಣೆ, ಅರ್ಥಶಾಸ್ತ್ರ ವಾಣಿಜ್ಯ, ಭೂಗೋಳ, ವಾಣಿಜ್ಯಲೆಕ್ಕಗಳು, ಪತ್ರವ್ಯವಹಾರ, ಬೆರಳಚ್ಚು, ಆಧುನಿಕ ಪರಭಾಷೆ, ವಿತರಣೆ ವಿದ್ಯೆ, ಶೀಘ್ರಲಿಪಿ, ಜಾಹೀರಾತು ವಿದ್ಯೆ ಮುಂತಾದವು ಸೇರಿರುತ್ತವೆ.

	ಫೋಕ್ ಹೈಸ್ಕೂಲುಗಳು, ನಾಗರಿಕ ಹಾಗೂ ಕಾರ್ಮಿಕ ಸಂಸ್ಥೆಗಳು, ಗ್ರಂಥಾಲಯಗಳು, ಉಪನ್ಯಾಸ ಸಪ್ತಾಹಗಳು, ಅಂಚೆಶಿಕ್ಷಣ-ಇವು ವಯಸ್ಕರ ಶಿಕ್ಷಣಕ್ಕಿರುವ ಸೌಲಭ್ಯಗಳು. ಇವಕ್ಕೆಲ್ಲ ಸರ್ಕಾರ ಧನಸಹಾಯ ನೀಡುತ್ತದೆ.

	ಪ್ರಾಥಮಿಕ ಪೂರ್ವದ ಶಾಲೆಗಳ ಅಧ್ಯಾಪಕರ ಶಿಕ್ಷಣಕ್ಕಾಗಿ ಎರಡು ವರ್ಷ ನರ್ಸರಿ ಶಾಲಾ ತರಬೇತಿ ಕಾಲೇಜುಗಳಿವೆ. ಜೂನಿಯರ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದವರನ್ನು ಇಲ್ಲಿಗೆ ಸೇರಿಸಿಕೊಳ್ಳಲಾಗುವುದು. ಪ್ರಾಥಮಿಕ ಶಾಲೆಯ ಅಧ್ಯಾಪಕರ ಶಿಕ್ಷಣಕ್ಕಾಗಿ ಎರಡು ವರ್ಷ ಪ್ರತ್ಯೇಕ ತರಬೇತಿ ಕಾಲೇಜುಗಳಿವೆ. ಅಲ್ಲಿಗೆ ಸೀನಿಯರ್ ಪ್ರೌಢ ಶಾಲಾ ಶಿಕ್ಷಣ ಮುಗಿಸಿದವರಿಗೆ ಮಾತ್ರ ಪ್ರವೇಶ. ಪ್ರೌಢ ಶಾಲೆಯ ಶಿಕ್ಷಕರಿಗೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವೀಯಲಾಗುವುದು. ಉದ್ಯೋಗಶಾಲೆ, ಲಲಿತಕಲಾಶಾಲೆ, ತಾಂತ್ರಿಕಶಾಲೆ ಮುಂತಾದವುಗಳ ಶಿಕ್ಷಕರ ತರಬೇತಿಗಾಗಿ ವಿಶಿಷ್ಟ ಶಿಕ್ಷಣ ಸಂಸ್ಥೆಗಳಿವೆ. ಈ ಎಲ್ಲ ಸಂಸ್ಥೆಗಳಲ್ಲೂ ಶಿಕ್ಷಣಶಾಸ್ತ್ರಕ್ಕೆ ಸಂಬಂಧಿsಸಿದ ಸೈದ್ಧಾಂತಿಕ ವಿಷಯಗಳಂತೆ ಸಾಮಾನ್ಯ ವಿಷಯಗಳ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಿದೆ. ಅಭ್ಯಾಸ ಪಾಠ ಬೋಧನೆಯನ್ನು ನಾರ್ಮಲ್ ಸ್ಕೂಲ್‍ಗಳಲ್ಲಿ ಏರ್ಪಡಿಸಲಾಗುತ್ತಿದೆ.

	1688ರ ರಾಜ್ಯಶಾಸನದ ಪ್ರಕಾರ ಈಚೆಗೆ 9 ವರ್ಷದ ಕಡ್ಡಾಯ ಪ್ರಾಥಮಿಕ ಅಥವಾ ಮೂಲಶಿಕ್ಷಣ ರೂಪುಗೊಳ್ಳುತ್ತಿದೆ. ಪ್ರಾಥಮಿಕ ಶಾಲೆ, ಸಿವಿಕ್ ಶಾಲೆ, ಉದ್ಯೋಗ ಶಿಕ್ಷಣದ ಶಾಲೆ, ಜ್ಯೂನಿಯರ್ ಪ್ರೌಢಶಾಲೆ ಇವೆಲ್ಲ ವ್ಯಾಪಕರೀತಿಯ ಕಡ್ಡಾಯ ಶಿಕ್ಷಣ ಯೋಜನೆಯಲ್ಲಿ ಪಾತ್ರವಹಿಸುತ್ತವೆ. ಅಲ್ಲಿ ಸಾಮಾನ್ಯ ವಿಷಯಗಳಂತೆ ಐಚ್ಛಿಕ ವಿಷಯಗಳ ವ್ಯಾಸಂಗಕ್ಕೂ (ಕೊನೆಯ ವರ್ಷಗಳಲ್ಲಿ) ಅವಕಾಶ ಕಲ್ಪಿಸಲಾಗುತ್ತಿದೆ. ಈ ಶಾಲೆಗಳನ್ನು ಆಯಾ ಪ್ರದೇಶದ ಕಮ್ಯೂನುಗಳೇ ಆರಂಭಿಸಿ ನಡೆಸಿಕೊಂಡು ಬರುತ್ತಿವೆ.	
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ